Thursday, September 20, 2012

ಸ್ಮಾರಕ
ಹಲವು ದಿನಗಳು ಉರುಳಿವೆ. ಇಂದು ನಾಳೆ ಎಂದು ಒಂದೊಂದೆ ದಿನಗಳನ್ನೂ ದೂಡುತ್ತಿರುವ ನನಗೆ ನಿಶ್ಚಿತ ದಿನ ಸಿಗುತ್ತಿಲ್ಲ. ಏನು ಮಾಡುವುದು ಹೀಗೆ ಕಾಲ ದೂಡುತ್ತಾ ಹೋದರೆ ಬದುಕು ಹಸನಾಗುವುದಾದರೂ ಎಂತು. ನನ್ನ ವರ್ತನೆ ಸೋಮಾರಿತನ, ಆಲಸ್ಯ, ಅಸಡ್ಡೆಯನ್ನೇನಾದರೂ ಬಿಂಬಿಸುತ್ತಿದೆಯಾ ಎಂದು ಹಲವು ಬಾರಿ ಪ್ರಶ್ನೆ ಮಾಡಿಕೊಂಡ ನಂತರವೂ ನನಗೆ ಸ್ಪಷ್ಟವಾದ ದಾರಿ ಕಾಣುತ್ತಿಲ್ಲ. ಏನಾದರೂ ಸರಿ ಬದುಕಿನ ಅಸಡ್ಡೆ ಮೀರಿ ನಡೆಯಲೇ ಬೇಕು ಗುರಿಯ ಸನಿಹವಾದರೂ ಮುಟ್ಟಿ ಉಸಿರು ನಿಲ್ಲಿಸಬೇಕು ಎಂಬ ದೃಢ ನಿಶ್ಚಯ ಗಟ್ಟಿಯಾಗುತ್ತಲೇ ಇತ್ತು. ಆದರೆ, ಗುರಿಯ ಬಳಿ ಹೋಗುವ ಮಾತಿಗಿಂತ, ಉಸಿರುವ ನಿಲ್ಲಿಸವು ಮಾತೇ ಬಹುತೇಕ ಆಲೋಚನೆ, ಚಿಂತೆ, ಚಿಂತನೆಯ ಜಾಗ ಆವರಿಸಿದ್ದವು.
ಇಂದು ಬೆಳಿಗ್ಗೆ ಎದ್ದಾಗ ನನ್ನ ಡೈರಿಯ ಹಳೆಯ ವಿಷಯಗಳನ್ನು ಮೆಲುಕು ಹಾಕುತ್ತಿದ್ದಾಗ ಥಟ್ಟನೇ ಆಲೋಚನೆಯೊಂದು ಹಾದುಹೋಯಿತು. ಹೇಗಾದರೂ ಸರಿ ಬದುಕಿನ ಬಾಗಿಲ ಬಳಿ ನಿಂತ ನನಗೆ ಸಾವಿನ ಅಂತಿಮ ದರ್ಶನ ಆಗುವುದು ಸತ್ಯ. ಆದರೆ, ಅದಕ್ಕೂ ಮುನ್ನ ಏನನ್ನಾದರೂ ಮಾಡಬೇಕು ಎಂದು ಹೇಳುವವರಿದ್ದಾರಲ್ಲ ಅವರಿಗೊಂದು ಸೂಕ್ತ ಉತ್ತರ ನೀಡದೇ ಹೋದಲ್ಲಿ ನನ್ನ ಜೀವನದ ಸಾರ್ಥಕ್ಯವಾದರೂ ಏನು? ಒಂದು ವೇಳೆ ಹೇಳದಿದ್ದರೆ ಅವರೇನು ನನ್ನನ್ನು ಪೀಡಿಸುತ್ತಾರಾ? ಕೊರಳ ಪಟ್ಟಿ ಹಿಡಿದು ವಿವರಿಸುವಂತೆ ತಾಕೀತು ಮಾಡುತ್ತಾರಾ? ಇಲ್ಲವಲ್ಲಾ. ಹಾಗಿದ್ದರೆ ನಾನು ಅವರಿಗೆ ಉತ್ತರ ಹೇಳುವ ಔಚಿತ್ಯವಾದರೂ ಏನು ಎಂದು ಹಲವು ಬಾರಿ ಯೋಚಿಸಿದೆ.
ಬದುಕು ಹುಟ್ಟಿನಿಂದ ಸಾಯುವವರೆಗಿನ ಪಯಣ ಎಂದು ಹೇಳುತ್ತಾರೆ. ಆ ಪಯಣದಲ್ಲಿ ನಮ್ಮೊಂದಿಗೆ ಹಲವರಿರುತ್ತಾರೆ. ಆ ಪಯಣದಲ್ಲಿ ನಾನೇ ಯಾಕೆ ವಿಶೇಷವಾಗಿ ಇರಬೇಕು. ಎಲ್ಲರಂತೆ ಪಯಣ ಮಾಡಿದರೆ, ಬದುಕು ಸಾರ್ಥಕವಾಗದಾ? ಗೊತ್ತಿಲ್ಲ. ಪಯಣ ಅಂತಹುದ್ದು. ಪಯಣದ ದಿಗಂತ ಒಂದೇ ಆದರೂ, ಸಾಗುವ ಬಗೆ ಹಲವು; ದಿಗಂತ ಒಂದೇ ಆದಮೇಲೆ ಸಾಗುವ ಬಗೆ ಕುರಿತು ಆಲೋಚಿಸುವುದು ಸೂಕ್ತವೇ? ಅದು ಗೊತ್ತಿಲ್ಲ. ಸರಿ ಸಾಗುವ ಕುರಿತು ಯೋಚಿಸೋಣ. ಹಲವರು ಪಯಣ ಮುಗಿಸುವ ಮುನ್ನ ದಾರಿಯುದ್ದಕ್ಕೂ ಒಂದೊಂದು ಸಾಧಕ ಸ್ಮಾರಕ ನಿಮರ್ಿಸಿ ಹೋಗಿದ್ದಾರೆ. ಅವರಂತೆ ನಾನೂ ಸಹ ಸಾಧಕ ಸ್ಮಾರಕ ನಿಮರ್ಿಸಿ, ಪಯಣಿಸಿಬಿಡುತ್ತೇನೆ. ಆಗ ನಾನ್ಯಾರಿಗೂ ಉತ್ತರ ಹೇಳಲೇಬೇಕಿಲ್ಲ ತಾವಾಗಿಯೇ ನನ್ನ ಸ್ಮಾರಕ ಹುಡುಕುತ್ತಾರೆ. ಹಾಂ! ಇದೇ ಸರಿಯಾದ ಮಾರ್ಗ ಎಂದು ವಿಷಯದ ಪೀಠಿಕೆ ಆರಂಭಕ್ಕೆ ನಿಂತೆ.
ಸರಿ ಸ್ಮಾರಕ ನಿಮರ್ಿಸೋಣ. ಆದರೆ, ಈಗಾಗಲೇ ಸಾವಿರಾರು ಸ್ಮಾರಕ ದಾರಿಯುದ್ದಕ್ಕೂ ಇವೆಲ್ಲಾ. ಅವುಗಳ ಮಧ್ಯೆ ನನ್ನದು ಹುಡುಕುವಂತಹ ಸ್ಮಾರಕವಾಗಿಬಿಟ್ಟರೆ. ಬರು ಬರುತ್ತಾ ಸ್ಮಾರಕ ಹುಡುಕುವವರು ಬೇಸತ್ತು ಹೋಗಿ, ನನ್ನ ಸ್ಮಾರಕ ಮರೆತು ಬಿಟ್ಟರೆ ಹೇಗೆ? ಹೌದು, ಇದನ್ನು ಗಂಭೀರವಾಗಿ ಆಲೋಚಿಸಲೇಬೇಕು. ಹೇಗೋ ಕಟ್ಟುವುದೇ ನಿಜ ಎಂದ ಮೇಲೆ ದೊಡ್ಡ, ಭವ್ಯ, ಆಕರ್ಷಕ ಸ್ಮಾರಕ ಕಟ್ಟಲೇಬೇಕು ಎಂಬ ಆಲೋಚನೆ ಹರಿಯುತ್ತಾ ಸಾಗಿತು. ಸರಿ ಹಾಗಿದ್ದರೆ ಒಮ್ಮೆ ಈಗಿರುವ ಸ್ಮಾರಕ ನೋಡಿ ಬಿಡೋಣ. ಆಮೇಲೆ ಅವೆಲ್ಲಕ್ಕಿಂತ ಭಿನ್ನವಾದ ಸ್ಮಾರಕ ಕಟ್ಟಿಬಿಡಬಹುದು ಎಂಬ ನಿಧರ್ಾರ ಮನಮುದ್ರಣದಿಂದ ದಪ್ಪವಾಗಿ ಪ್ರಕಟಗೊಂಡಿತು.
ಅಯ್ಯೋ ಇದು ಸರಿಯಾ? ಯಾರದ್ದೋ ಸ್ಮಾರಕ ನೋಡಿ ನಾನೊಂದು ಸ್ಮಾರಕ ಕಟ್ಟಿದರೆ ಅದು ಸುಂದರವಾಗಿ ಕಾಣುತ್ತಾ? ಎಂಬ ತೊಳಲಾಟ ಆರಂಭವಾಯಿತು. ತೊಳಲಾಟ ಮತ್ತೆ ನನ್ನನ್ನು ಸೀದಾ ವಾಪಾಸ್ಸು ಯೋಚನೆಯ ಪೀಠಿಕೆಗೆ ಕರೆದೊಯ್ಯಿತು. ಅಯ್ಯೋ ಸಧ್ಯ ಸ್ಮಾರಕದ ಸರಣಿ ಕೈ ಬಿಡೋಣ ಎಂದು ಮೈ ಕೊಡವಿಕೊಂಡು ಮೇಲೆದ್ದು, ರೂಮಿನ ಬಾಗಿಲು ತೆರೆದು ಟೀ ಅಂಗಡಿಯತ್ತ ಪಾದ ಹರಿಸಿದೆ.......